ಹೊಸಗನ್ನಡದ ಕಿರಣೋದಯಕ್ಕೆ ತಮ್ಮ ವ್ಯಕ್ತಿತ್ವದ ಪ್ರಭೆಯನ್ನು ಸೇರಿಸಿದ ಹಲವು ಹಿರಿಯ ಸಾಹಿತಿಗಳಲ್ಲಿ ಗೋವಿಂದ ಪೈ ಅವರೂ ಒಬ್ಬರು. ಕನ್ನಡ ಕಾವ್ಯ ಸ್ಥಗಿತಗೊಂಡು ಆಗಲೇ ಮೂರು ದಶಕಗಳಾಗಿದ್ದ ಅಂದಿನ ಪರಿಸರದಲ್ಲಿ, ಅದಕ್ಕೆ ಹೊಸ ನೀರನ್ನು ನುಗ್ಗಿಸಿ,ಹೊಸ ಕಾಲುವೆಗಳನ್ನು ತೋಡಿ, ಹೊಸ ಹಸಿರನ್ನು ಬೆಳೆಯಲು ಶ್ರಮಿಸಿದವರಲ್ಲಿ ಪೈ ಅವರು ಮುಖ್ಯರಾದವರು. ಅಂದಿನ ಸಾಹಿತ್ಯಕ್ಕೆ ಚಲನಶೀಲತೆಯನ್ನು ತರುವ ಹೊಸರೂಪಗಳ ಹುಡುಕಾಟ ನಡೆದದ್ದು, ಮಂಗಳೂರು, ಮೈಸೂರು ಮತ್ತು ಧಾರವಾಡದ ಪರಿಸರಗಳಲ್ಲಿ.ಮಂಗಳೂರಿನ ಪರಿಸರದಲ್ಲಿ ಇನ್ನೂ ಹಲವರ ಜತೆ, ತಮ್ಮ ಸಂಶೋಧನೆ ಹಾಗೂ ಬರೆಹಗಳ ಮೂಲಕ, ಹೊಸ ರೂಪಗಳನ್ನು ಕನ್ನಡ ಸಾಹಿತ್ಯಕ್ಕೆ ತಂದವರು ಪೈ ಅವರು ಸಾಹಿತ್ಯ ಸಂಶೋಧನೆ ಮತ್ತು ಕಾವ್ಯ ಈ ಎರಡೂ ಅವರು ಕೆಲಸ ಮಾಡಿದ ಪ್ರಮುಖ ಕ್ಷೇತ್ರಗಳು. ಕನ್ನಡ ಸಂಶೋಧನೆಯ ಶಿಲಾತಲದಿಂದ ಅವರು ತೆಗೆದ ಎಷ್ಟೋ ಸಂಗತಿಗಳು, ಮುಂದಿನವರ ಚಿಂತನೆಯ ನೆಲೆಗಟ್ಟುಗಳಾಗಿವೆ.
ಗೋವಿಂದ ಪೈ ಮೊದಲು ತಮ್ಮ ಕವಿತೆಯನ್ನು ಪ್ರಕಟಿಸಿದ್ದು ೧೯೦೦ರಲ್ಲಿ; ಆನಂತರ ಆರು ದಶಕಗಳವರೆಗೆ ಸಾಗಿತು ಅವರ ಸಾಹಿತ್ಯ ನಿರ್ಮಿತಿ. ಪೈ ಅವರು ಸಾಹಿತ್ಯ ನಿರ್ಮಿತಿಗೆ ತೊಡಗಿದ ಕಾಲವನ್ನು ಇಂದು ನಾವು ‘ನವೋದಯ’ ಎಂದು ಗುರುತಿಸುತ್ತೇವೆ, ಮತ್ತು ಕಾವ್ಯದ ಮಟ್ಟಿಗೆ ಅವರನ್ನು ನವೋದಯ ಪರಂಪರೆಗೆ ಸೇರಿದವರು ಎಂದು ಪರಿಗಣಿಸುತ್ತೇವೆ. ಇಂದು ಯಾವುವನ್ನು ‘ನವೋದಯ ಸಾಹಿತ್ಯದ ಲಕ್ಷಣಗಳು’ ಎಂದು ಗುರುತಿಸುತ್ತೇವೆಯೋ, ಅವು ಪೈ ಅವರ ಕಾವ್ಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಲುತ್ತವೆ. ಈ ದೃಷ್ಟಿಯಿಂದ ಪೈ ಅವರ ಕಾವ್ಯ ನವೋದಯದ ಚೌಕಟ್ಟಿನೊಳಗಣದು. ನವೋದಯ ಕಾವ್ಯದ ಈ ಹಾದಿಯಲ್ಲಿ, ಕನ್ನಡ ಕಾವ್ಯ ಪ್ರಕಾರಗಳ ದೃಷ್ಟಿಯಿಂದ ಮತ್ತು ಪ್ರಯೋಗಗಳ ದೃಷ್ಟಿಯಿಂದ ಹಲವು ‘ಮೊದಲು’ಗಳನ್ನು ತೆರೆದವರು ಅವರು
from: kanaja
No comments:
Post a Comment